ತೈತ್ತಿರೀಯೋಪನಿಷತ್ತು
ಪ್ರಧಾನ ಉಪನಿಷತ್ತುಗಳಲ್ಲೊಂದು. ಇದರಲ್ಲಿ ಕೃಷ್ಣಯಜುರ್ವೇದದ ತೈತ್ತಿರೀಯ ಶಾಖೆಯ ಆರಣ್ಯಕದ ಏಳು ಎಂಟು ಒಂಬತ್ತನೆಯ ಪ್ರಪಾಠಕಗಳಿವೆ. ಈ ಉಪನಿಷತ್ತಿನಲ್ಲಿ ಶಿಕ್ಷಾವಲ್ಲೀ, ಆನಂದವಲ್ಲೀ, ಭೃಗುವಲ್ಲೀ, ಎಂಬ ಅನ್ವರ್ಥವಾದ ಮೂರು ಅಧ್ಯಾಯಗಳಿವೆ. ಶಿಕ್ಷಾವಲ್ಲೀಯಲ್ಲಿ ಹನ್ನೆರಡು, ಅನಂದವಲ್ಲಿಯಲ್ಲಿ ಒಂಬತ್ತು ಮತ್ತು ಭೃಗುವಲ್ಲಿಯಲ್ಲಿ ಹತ್ತು ಅನುವಾಕಗಳೆಂಬ ವಿಭಾಗಗಳಿವೆ.

ಶಂನೋ ಮಿತ್ರಃ ಸಂ ವರುಣಃ ಎಂದಾರಂಭವಾಗುವ ಶಾಂತಿಪಾಠವೇ ಶಿಕ್ಷಾವಲ್ಲಿಯ ಮೊದಲ ಅನುವಾಕ. (2) ವೇದವಾಕ್ಯಗಳ ಸರಿಯಾದ ಅರ್ಥವಾಗಬೇಕಾದರೆ ಆ ವಾಕ್ಯಗಳ ಸಕ್ರಮ ಉಚ್ಚಾರ ತಿಳಿದಿರಬೇಕು. ವೇದೋಚ್ಛಾರಣಕ್ಕೆ ಅಗತ್ಯವಾದ್ದು ಶಿಕ್ಷಾಶಾಸ್ತ್ರ. ಈ ಶಾಸ್ತ್ರ ವರ್ಣ, ಸ್ವರ, ಮಾತ್ರಾ, ಬಲ (ಪ್ರಯತ್ನ) ಸಾಮ, ಸಂತಾನ, (ಸಂಧಿ) ಗಳನ್ನು ಪ್ರಧಾನವಾಗಿ ಬೋಧಿಸುತ್ತದೆ. (3) ಆಚಾರ್ಯ ಶಿಕ್ಷಾಶಾಸ್ತ್ರವನ್ನು ಅಧಿಕರಿಸಿ ವೇದಾಧ್ಯಯನ ಮಾಡಿದ ಶಿಷ್ಯನಿಗೂ ತನಗೂ ಬ್ರಹ್ಮವರ್ಚಸ್ಸೂ ಯಶಸ್ಸೂ ಒಟ್ಟಿಗೇ ಉಂಟಾಗಲೆಂದು ಹಾರೈಸಿ, ವೇದವಾಕ್ಯಗಳಲ್ಲಿನ ಸಂಹಿತಾ (ಸಂಧಿ) ರಹಸ್ಯವನ್ನು ಲೋಕ ಜ್ಯೋತಿಸ್ಸು ವಿದ್ಯೆ ಪ್ರಜೆ ಶರೀರಗಳಿಗೂ ಮುಂದುವರಿಸಿ ಈ ಐದು ಮಹಾ ಸಂಹಿತೆಗಳ ರಹಸ್ಯವನ್ನೂ ಅದನ್ನರಿಯದವರ ಫಲವನ್ನೂ ವಿವರಿಸುತ್ತಾನೆ. (4) ಪ್ರಣವ ವೇದಗಳಲ್ಲಿ ಶ್ರೇಷ್ಠವಾದುದು. ವಿಶ್ವರೂಪವುಳ್ಳದ್ದು. ಅಮೃತನಾದ ಪರಮಾತ್ಮನಿಂದ ವೇದಗಳಿಗಿಂತ ಅಧಿಕವಾದುದಾಗಿ ಉಂಟಾದುದು. ಇಂಥ ಪ್ರಣವವನ್ನು ಕುರಿತು ಆಚಾರ್ಯ ಪ್ರಾರ್ಥಿಸುತ್ತಾನೆ- ``ಅಮೃತ ಸ್ವರೂಪಿಯಾದ ಪರಮಾತ್ಮನ ಧಾರಣೆ ಸದಾ ನನ್ನಲ್ಲಿರಲಿ. ನನ್ನ ಶರೀರ ಕಾಂತಿಯಕ್ತವಾಗಲಿ, ನಾಲಗೆ ಬ್ರಹ್ಮವದನ ಶೀಲವಾಗಿ ಭೋಗ್ಯತಮವಾಗಲಿ, ಕಿವಿಗಳಿಂದ ಬ್ರಹ್ಮಪ್ರತಿಪಾದಕಶಾಸ್ತ್ರಗಳನ್ನು ನಾನು ವಿಶೇಷವಾಗಿ ಕೇಳುವಂತಾಗಲಿ, ಬ್ರಹ್ಮನ ಕೋಶವೇ ನೀನು; e್ಞÁನದಿಂದ ಮುಚ್ಚಲ್ಪಟ್ಟಿರುವೆ. ನನ್ನಿಂದ ಶ್ರುತವಾಗಿರುವ ತತ್ತ್ವಾರ್ಥ ಮರೆತು ಹೋಗದಂತೆ ರಕ್ಷಿಸು.`` ಬಳಿಕ ಶ್ರೀಕಾಮನಾಗಿ ಮೇಧಾಕಾಮನಾಗಿ ಹೋಮಾದಿಗಳಲ್ಲಿ ವಿನಿಯೋಗವಾಗುವ ಮಂತ್ರಗಳನ್ನು ಪಠಿಸಿ ಐಹಿಕ ಮತ್ತು ಪಾರಲೌಕಿಕ ಅಭ್ಯುದಯಕ್ಕಾಗಿ ಭಗವಂತನಲ್ಲಿ ಮೊರೆಯಿಡುತ್ತಾನೆ. ಇಲ್ಲಿಂದ ಮುಂದಕ್ಕೆ ಉಪಾಸನಾವಿಷಯ; ಮೊದಲು ವ್ಯಾಹೃತ್ಯುಪಾಸನೆ. (5) ಭೂಃ ಭುವಃ ಸುವಃ - ಇವು ವ್ಯಾಹೃತೀತ್ರಯ. ಮಹಃ ಎಂಬುದು ನಾಲ್ಕನೆಯ ವ್ಯಾಹೃತಿ. ಇದೇ ಬ್ರಹ್ಮ ಇದೇ ಆತ್ಮ. ಈ ನಾಲ್ಕು ವ್ಯಾಹೃತಿಗಳನ್ನೂ ಭೂಲೋಕ ಅಂತರಿಕ್ಷ. ಸ್ವರ್ಗಲೋಕ ಆದಿತ್ಯ ಎಂದೂ ಅಗ್ನಿ ವಾಯು ಆದಿತ್ಯ ಚಂದ್ರಮಾ ಎಂದೂ ಋಕ್ ಸಾಮ ಯಜಸ್ಸು ಬ್ರಹ್ಮ ಎಂದೂ ಪ್ರಾಣ ಅಪಾನ ವ್ಯಾನ ಅನ್ನ ಎಂದೂ ನಾಲ್ಕು ಪ್ರಕಾರವಾಗಿ ಉಪಾಸಿಸಬೇಕು. ಅದರಿಂದ ಬ್ರಹ್ಮe್ಞÁನ ಪ್ರಾಪ್ತಿಯಾಗುತ್ತದೆ. ಅಂಥವನ್ನು ದೇವತೆಗಳೂ ಪೂಜಿಸುತ್ತಾರೆ. (6) ಅವಿನಾಶಿಯೂ ಹಿರಣ್ಮಯನೂ ಮನೋಮಯನೂ ಆದ ಬ್ರಹ್ಮ (ಪರಮಾತ್ಮ) ಎಲ್ಲರ ಹೃದಯಾಂತರ್ಗತ ಆಕಾಶದಲ್ಲಿದ್ದಾನೆಂದು ಉಪಾಸಿಸುವವ ಬ್ರಹ್ಮರಂಧ್ರದಿಂದ ಹೊರಹೊರಟ ಸುಷುಮ್ನಾನಾಡಿಯ ಮೂಲಕ ಶರೀರತ್ಯಾಗ ಮಾಡಿದ ಅನಂತರ ಮೇಲೆ ಹೇಳಿದ ವ್ಯಾಹೃತ್ಯುಪಾಸನೆಯಿಂದ ಕ್ರಮವಾಗಿ ಅಗ್ನಿಯಲ್ಲೂ ವಾಯುವಿನಲ್ಲೂ ಆದಿತ್ಯನಲ್ಲೂ ಬ್ರಹ್ಮನಲ್ಲೂ ಪ್ರತಿಷ್ಠಿತನಾಗುತ್ತಾನೆ. ಹೀಗೆ ಅವನು ಸ್ವಾರಾಜ್ಯವನ್ನು (ತನ್ನ) ಮನಃಸ್ವಾಮ್ಯವನ್ನೂ ಹೊಂದುತ್ತಾನೆ. ವಾಕ್‍ಚಕ್ಷುಸ್ ಶ್ರೋತ್ರವಿe್ಞÁನಗಳಿಗೂ ಸ್ವಾಮಿಯಾಗುತ್ತಾನೆ. ಅನಂತರ ಅವನಿಗೆ ಅಕಾಶ ಶರೀರನೂ ಸತ್ಯಾತ್ಮರಿಗೆ ಪ್ರಾಣದಂತೆ ಭೋಗ್ಯನೂ ಸಂಕಲ್ಪಮಾತ್ರದಿಂದ ಆನಂದಸ್ವರೂಪವನ್ನು ಶಾಂತ ಸಮೃದ್ಧನೂ ಅಮೃತನೂ ಆದ ಪರಬ್ರಹ್ಮನ ರೂಪವುಂಟಾಗುತ್ತದೆ. (7) ಇನ್ನು ಅಧಿಭೂತ ಅಧ್ಯಾತ್ಮಗಳ ಉಪಾಸನೆ. ಅಧಿಭೂತದಲ್ಲಿ ಪೃಥಿವೀ ಅಂತರಿಕ್ಷ ದ್ಯುಲೋಕ ದಿಕ್ಕುಗಳು ವಿದಿಕ್ಕುಗಳು ಎಂಬ ಐದು ಲೋಕ ಪಾಂಕ್ತಗಳು; ಅಗ್ನಿ ವಾಯು ಆದಿತ್ಯ ಚಂದ್ರಮಾ ನಕ್ಷತ್ರಗಳು ಎಂಬ ಐದು ದೇವತಾಪಾಂಕ್ತಗಳು; ನೀರು ಓಷಧಿಗಳು ಮರಗಳು ಅಕಾಶ ಅತ್ಮಾ ಎಂಬ ಐದು ಭೂತ ಪಾಂಕ್ತಗಳು. ಆಧ್ಯಾತ್ಮದಲ್ಲಿ ಪ್ರಾಣಾವ್ಯಾನಅಪಾನಉದಾನಸಮಾನ ಎಂಬ ಐದು ವಾಯ ಪಾಂಕ್ತಗಳು; ಚಕ್ಷುಸ್ಸು ಶ್ರೋತ್ರ ಮನಸ್ಸು ವಾಕ್ಕು ತ್ವಕ್ ಎಂಬ ಐದು ಇಂದ್ರಿಯಪಾಂಕ್ತಗಳು; ಚರ್ಮ ಮಾಂಸ ಸ್ನಾಯು ಅಸ್ಥಿ ಮಜ್ಜಾ ಎಂಬ ಐದು ಧಾತು ಪಾಂಕ್ರಗಳು. ಬ್ರಹ್ಮನನ್ನು ಅದಿ üಭೂತ ಆಧ್ಯಾತ್ಮಗಳ ಈ ಪಾಂಕ್ತಸ್ವರೂಪದಿಂದಲೇ ಉಪಾಸಿಸಬೇಕು. (8) ಮುಂದಿನದು ಎಲ್ಲ ಉಪಾಸನೆಗೂ ಪ್ರಧಾನ ಅಂಗವಾದ ಓಂಕಾರದ (ಪ್ರಣವ) ಉಪಾಸನೆ. ಓಂ ಎಂಬುದೇ ಬ್ರಹ್ಮ. ಎಲ್ಲವೂ ಓಂ ಎಂಬುದೇ. ಅಧ್ವರ್ಯು ಹೋತಾ ಬ್ರಹ್ಮಯಜಮಾನ ಎಲ್ಲರೂ ಓಂ ಎಂದೇ ಹೇಳುತ್ತಾರೆ. ವೇದಾಧ್ಯಯನ ಮಾಡುವವನೂ ಓಂ ಎಂದೇ ಹೇಳುತ್ತಾನೆ. ವೇದವನ್ನು ಹೊಂದಿಯೂ ಹೊಂದುತ್ತಾನೆ. (9) ವೇದಾಧ್ಯಯನ ಪ್ರವಚನಗಳ ಜತೆಯಲ್ಲೇ ಶ್ರೌತಸ್ಮಾರ್ತಕರ್ಮಗಳೂ ಅನುಷ್ಠೇಯಗಳು. ಋತ, ಸತ್ಯ, ತಪಸ್ಸು, ದಮ, ಶಮ, ಅಗ್ನಿ (ಆಧಾನ) ಅಗ್ನಿಹೋತ್ರ, ಅತಿಥಿ (ಸತ್ಕಾರ), ಮಾನುಷ (ಶ್ರದ್ಧಾದಿ) ಪ್ರಜಾ (ಲೋಕವ್ಯಾಪಾರ) ಪ್ರಜನ, (ಸಂತಾನಪ್ರಾಪ್ತಿ) ಪ್ರಜಾತಿ (ಪೌತಪ್ರಾಪ್ತಿ) ಇವು ಒಂದೊಂದನ್ನೂ ಅಧ್ಯಯನ ಪ್ರವಚನಗಳ ಜತೆಯಲ್ಲೇ ಅನುಷ್ಠಿಸಬೇಕು. (10) ತ್ರಿಶಂಕು ಋಷಿಗಳು ಬ್ರಹ್ಮೋಪಾಸನೆ ಮಾಡಿ ಪಡೆದ ಆತ್ಮಾನುಭವವನ್ನು ವೇದಾನುಚನವಾಗಿ ಹೀಗೆ ಹೇಳಿದ್ದಾರೆ: `ನಾನು ದೇಹಾಭಿಮಾನವೆಂಬ ವೃಕ್ಷವನ್ನು ಛೇದಿಸಿದ್ದೇನೆ. ಗಿರಿಶಿಖರದಂತೆ ಕೀರ್ತಿಶಾಲಿಯಾಗಿದ್ದೇನೆ. ಅಮೃತದಂತೆ ಸರ್ವೋತ್ತರ ಪುತ್ರನಾಗಿ ಸಮೀಚಿನ, ಭೋಗೋಪಕರಣಗಳುಳ್ಳ ಪರಮಾತ್ಮನಿಗೆ ಭೋಗ್ಯನಾಗಿದ್ದೇನೆ. ಪರಮಾತ್ಮನ e್ಞÁನವುಳ್ಳವನೂ ಅಮೃತನೂ ಅಕ್ಷಯನೂ ಆಗಿದ್ದೇನೆ`. (11) ಆಚಾರ್ಯ ಶಿಷ್ಯನಿಗೆ ವೇದಾಧ್ಯಯನವೆಲ್ಲವನ್ನೂ ಮಾಡಿಸಿದ ಮೇಲೆ ಅವನು ಮುಂದೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಸಲು ಹೀಗೆ ಅನುಶಾಸನ ಮಾಡುತ್ತಾನೆ - ಸತ್ಯಂ ವದ (ಸತ್ಯ ನುಡಿ); ಧರ್ಮಂ ಚರ (ಧರ್ಮ ಆಚರಿಸು); ವೇಧಾಧ್ಯಯನದಲ್ಲಿ ಅಜಾಗರೂಕನಾಗಬೇಡ, ಆಚಾರ್ಯನಿಗೆ ಪ್ರಿಯವಾದ (ದಕ್ಷಿಣಾ) ಧನವನ್ನು ತಂದುಕೊಡು. ಪುತ್ರಸಂತತಿಯ ವಿಚ್ಛೇದವಾಗದಿರಲು ಮದುವೆಯಾಗು. ಸತ್ಯದಿಂದ ಕದಲಕೂಡದು; ಧರ್ಮದಿಂದ ಕದಲಕೂಡದು; ಮಂಗಳಾಚರಣದಿಂದ ಕದಲಕೂಡದು; ಐಶ್ವರ್ಯಾರ್ಥಕರ್ಮದಿಂದ ಕದಲಕೂಡದು; ಸ್ವಾಧ್ಯಾಯ ಮತ್ತು ಪ್ರವಚನಗಳಿಂದ ಕದಲಕೂಡದು. ದೇವತಾಪಿತೃಕಾರ್ಯಗಳಿಂದ ಕದಲಕೂಡದು. ಮಾತೃದೇವೋಭವ (ತಾಯಿಯನ್ನು ದೇವರೆಂದು ಭಾವಿಸು), ಪಿತೃ ದೇವೋ ಭವ (ತಂದೆಯನ್ನು ದೇವರೆಂದು ಭಾವಿಸು) ಆಚಾರ್ಯ ದೇವೋ ಭವ (ಆಚಾರ್ಯನನ್ನು ದೇವರೆಂದು ಭಾವಿಸು), ಅತಿಥಿಗಳನ್ನು ದೇವರೆಂದು ಭಾವಿಸು, ಯಾವ ಕರ್ಮಗಳು ನಿಂದಿತವಲ್ಲವೋ ಅವನ್ನು ಸೇವಿಸಬೇಕು. ಇತರ ಕರ್ಮಗಳನ್ನು ಸೇವಿಸಿಕೂಡದು.  ನಾವು ಆಚರಿಸುವ ಕರ್ಮಗಳಲ್ಲಿ ಯಾವುವು ಸುಚರಿತವೋ ಅವನ್ನು ಉಪಾಸಿಸಬೇಕು. ಇತರ ಕರ್ಮಗಳನ್ನಲ್ಲ. ನಮಗಿಂತ ಶ್ರೇಷ್ಠರಾದ ಬ್ರಾಹ್ಮಣರ ಆಸನದಲ್ಲಿ ನೀನು ಕೂರಕೂಡದು. ಶ್ರದ್ಧೆಯಿಂದ ದಾನ ಮಾಡಬೇಕು. ಅಶ್ರದ್ಧೆಯಿಂದ ದಾನ ಮಾಡಕೂಡದು. ಪ್ರಸನ್ನತೆಯಿಂದ ದಾನ ಮಾಡಬೇಕು. ಆಜ್ಞೆಯಿಂದ ದಾನ ಮಾಡಬೇಕು.  ಭೀತಿಯಿಂದ ಧಾನ ಮಾಡಬೇಕು. ಸಮ್ಯಕ್ ಸಂಕಲ್ಪದಿಂದ ದಾನ ಮಾಡಬೇಕು. ಯಾವುದಾದರೂ ಕರ್ಮದಲ್ಲಾಗಲೀ ನಡವಳಿಕೆಯಲ್ಲಾಗಲೀ ಸಂಶಯವುಂಟಾದರೆ ವಿಚಾರಕುಶಲರೂ ವೇಧಶಾಸ್ತ್ರನಿಷ್ಠರೂ ಸದಾಚಾರಪರರೂ ಕ್ರೋಧಲೋಭಾದಿರಹಿತರೂ ಧರ್ಮಕಾಮರೂ ಆದ ಬ್ರಾಹ್ಮಣರೂ ಆ ವಿಷಯದಲ್ಲಿ ಹೇಗೆ ವರ್ತಿಸುತ್ತಾರೋ ಹಾಗೆ ನೀನೂ ವರ್ತಿಸು. ನಿಂದಿತಕರ್ಮಗಳ ವಿಷಯದಲ್ಲೂ ಅವರು ವರ್ತಿಸುವಂತೆ ನೀನೂ ವರ್ತಿಸು. ಇದು ಶಾಸನ. ಇದು ಉಪದೇಶ. ಇದು ವೇದರಹಸ್ಯ. (12) ಶಂನೋಮಿತ್ರಃ ಶಂವರುಣಃ ಎಂಬ ಶಾಂತಿಪಾಠದೊಡನೆ ಈ ಶಿಕ್ಷಾವಲ್ಲಿ ಉಪಸಂಹಾರಗೊಳ್ಳುತ್ತದೆ.  ಈ ರೀತಿ ಸಾಧಕನಾಗಲು ಅಗತ್ಯವಾದ ಪೂರ್ವಭಾವಿ ಅರ್ಹತೆಗಳೆಲ್ಲವೂ ಶಿಷ್ಯನೊಬ್ಬನಿಗೆ ಸರಿಯಾದ ಆಚಾರ್ಯನಿಂದ ಲಭಿಸುವ ಪ್ರಕಾರ ಈ ವಲ್ಲಿಯಲ್ಲಿ ನಿರೂಪಿತವಾಗಿದೆ.

ಆನಂದವಲ್ಲೀ (ಅಥವಾ ಬ್ರಹ್ಮಾನಂದವಲ್ಲೀ) ಮುಂದಿನದು: (1) ಬ್ರಹ್ಮ ವಿದಾಪ್ನೋತಿ ಪರಂ (ಬ್ರಹ್ಮ e್ಞÁನಿ ಪರಮ ಪ್ರಾಪ್ಯಯನ್ನು ಹೊಂದುತ್ತಾನೆ) ಎಂಬುದು ಈ ವಲ್ಲಿಯಲ್ಲಿನ ಪ್ರತಿಪಾದ್ಯ ವಿಷಯ. ಸತ್ಯಂ e್ಞÁನಮನಂತಂ ಬ್ರಹ್ಮ ಎಂಬುದು ಬ್ರಹ್ಮನ ಸ್ವರೂಪ ಬೋಧಕ ಲಕ್ಷಣ. ಸ್ವರೂಪತಃ ಗುಣತಃ ವುಭೂತಿತಃ ಬೃಹತ್ತ್ವಗುಣಶಾಲಿಯಾದ ಪರತತ್ತ್ವಕ್ಕೆ ಬ್ರಹ್ಮ ಎಂದು ಹೆಸರು. ಈ ಪರ ಬ್ರಹ್ಮ ಸತ್ಯ, ಅಂದರೆ ನಿರ್ವಿಕಾರಿ, ನಿರುಪಾದಿಕ ಸತ್ತೆ (ಇರುವಿಕೆ) ಯುಳ್ಳವ, ಯಾವಾಗಲೂ ಅವನ ಅಭಾವವಿರುವುದಿಲ್ಲ. ಅವನು e್ಞÁನ ಅಂದರೆ ನಿತ್ಯ ಮತ್ತು ಅಸಂಕುಚಿತ e್ಞÁನವೇ ಅವನ ಸ್ವರೂಪ. ಅವನು ಅನಂತ; ಅಂದರೆ ಅವನು ಸರ್ವದೇಶವ್ಯಾಪಿ, ಸರ್ವಕಾಲವ್ಯಾಪಿ, ಸರ್ವವಸ್ತುಗಳಿಗೂ ಅಂತರ್ಯಾಮಿ ಹೃದಯಗುಹಾಂತವರ್ತಿಯಾದ ಈ ಬ್ರಹ್ಮನನ್ನು ಅಂದರೆ ಸ್ವಾಂತಯಾಮಿಯಾದ ಪರಮಾತ್ಮನನ್ನು ಉಪಾಸಿಸುವವನಿಗೆ ಕಲ್ಯಾಣಗುಣ ವಿಶಿಷ್ಟನಾದ ಪರಬ್ರಹ್ಮನೇ ಪ್ರಾಪ್ಯ. ಪರಬ್ರಹ್ಮನ ಅವನ ಕಲ್ಯಾಣಗುಣಗಳೂ ಪರಮಾಕಾಶವೆಂಬ ನಿತ್ಯ ವಿಭೂತಿಯಲ್ಲಿ ಉಪಾಸಕನಿಗೆ ಭೋಗ್ಯಗಳಾಗಿ ಪ್ರಾಪ್ತವಾಗುತ್ತವೆ. ಇಂಥ ಬ್ರಹ್ಮದಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಪೃಥಿವೀ, ಪೃಥಿವಿಯಿಂದ ಓಷಧಿಗಳು, ಓಷಧಿಗಳಿಂದ ಅನ್ನ, ಅನ್ನದಿಂದ ಪುರುಷ - ಹೀಗೆ ಸೃಷ್ಟಿಯಾಗುತ್ತದೆ. ಈ ಪುರುಷನೇ ಅನ್ನರ ಸಮಯ, ಮನುಷ್ಯಶರೀರ, (2 - 5) ಇದರೊಳಗೆ ಪ್ರಾಣಮಯ ಪುರುಷ, ಅದರೊಳಗೆ ಮನೋಮಯ ಪುರುಷ, ಅದರೊಳಗೆ ವಿe್ಞÁನಮಯ ಪುರುಷ, ಅದರೊಳಗೆ ಆನಂದಮಯ ಪುರುಷ ಇದ್ದಾನೆ. (6) ಬ್ರಹ್ಮe್ಞÁನವೆಂಬುದು ಇಲ್ಲವಾದರೆ ಅಂಥವ ಅಸಂತನೇ (ಅಸನ್ - ಇಲ್ಲದವ) ಆಗುತ್ತಾನೆ. ಬ್ರಹ್ಮಜ್ಞಾನವೆಂಬುದು ಇದೆಯಾದರೆ ಅವನನ್ನು (ಜ್ಞಾನಿಗಳು) ಸಂತನೆಂದು ತಿಳಿಯುತ್ತಾರೆ. ವಿe್ಞÁನಮಯನಿಗೆ (ಜೀವಾತ್ಮ) ಯಾವನು ಆತ್ಮನೋ ಅವನೇ ಈ ಆನಂದಮಯನಿಗೂ ಆತ್ಮ, ಅಂದರೆ ಆನಂದಮಯನು ಅನನ್ಯಾತ್ಮ -ಎಂದು ಭಾವ. ಇನ್ನು ಈ ಅನು ಪ್ರಶ್ನೆಗಳು ಹುಟ್ಟುತ್ತವೆ - ಹೀಗೆ e್ಞÁನಿಯಾದವ ಈ ಲೋಕವನ್ನು ಬಿಟ್ಟಮೇಲೆ ಬೇರೆ ಯಾವುದನ್ನು ಹೊಂದುತ್ತಾನೆ? ಅಲ್ಲಿ ಏನನ್ನು ಭೋಗ್ಯತ್ವೇನ ಪಡೆಯುತ್ತಾನೆ? (ಅಥವಾ ಬ್ರಹ್ಮe್ಞÁನವಿಲ್ಲದವ ದೇಹತ್ಯಾಗ ಮಾಡಿದ ಮೇಲೆ ಪರಮಾತ್ಮನನ್ನು ಹೊಂದುತ್ತಾನೆಯೇ? ಹಾಗಿಲ್ಲದಿದ್ದರೆ (ಬ್ರಹ್ಮ ಎಲ್ಲರಿಗೂ ಸಮನಾದ್ದರಿಂದ) ಬ್ರಹ್ಮe್ಞÁನವಿರುವವನೂ ಪರಮಾತ್ಮನನ್ನು ಹೊಂದನೆ? (ಇದಕ್ಕೆ ಉತ್ತರವಾಗಿ ಇಲ್ಲಿಂದ ಮುಂದೆ (ಎ) ಸಮಸ್ತವೂ ಸತ್ಯ( ಅಥವಾ ಬ್ರಹ್ಮ ಸತ್ಯ) ಎಂದು (ಬಿ) ಪರಬ್ರಹ್ಮನಲ್ಲಿ ನಿರಂತರ ಧ್ಯಾನನಿಷ್ಠೆಯಿಲ್ಲದವನಿಗೆ (ಜನ್ಮಮರಣ) ಭಯವಿದ್ದೇ ಇದೆಯೆಂದೂ (ಸಿ) ಬ್ರಹ್ಮೋಪಾಸಕನಾದ e್ಞÁನಿ ದೇಹತ್ಯಾಗ ಮಾಡಿದ ಮೇಲೆ ಆನಂದಮಯನಾದ ಪರಮಾತ್ಮನನ್ನು (ಸೇರಿ ಅವನ ಕಲ್ಯಾಣಗುಣಗಳನ್ನು ಭೋಗ್ಯತ್ವೇನ) ಹೊಂದುವನೆಂದೂ ಪ್ರತಿಪಾದಿಸಲಾಗುತ್ತದೆ. ಈ ಆನಂದಮಯಾತ್ಮ `ನಾನು (ದೇವಮನುಷ್ಯಾದಿ ರೂಪದಿಂದ) ಬಹುವಾಗುವೆನು ಅದಕ್ಕಾಗಿ (ಆಕಾಶ ಮುಂತಾದ ರೂಪದಿಂದ) ಹುಟ್ಟುವೆನು` ಎಂದು ಸಂಕಲ್ಪಿಸಿದ. ಆಲೋಚಿಸಿದ. (ಶಪ್ _ ಆಲೋಚಿಸು).  ಆಲೋಚಿಸಿ ಇದೇನೇನಿದೆಯೋ ಎಲ್ಲವನ್ನೂ ಸೃಷ್ಟಿಸಿ ಅನುಪ್ರವೇಶ ಮಾಡಿದ. ತಾನೇ ನಿರ್ವಿಕಾರಿಯಾದ ಚೇತನನೂ ವಿಕಾರಿ ಅಚೇತನನೂ ಆದ. ನಾಮರೂಪಗಳಿಲ್ಲದ ಚೇತನನೂ ಬೇರೆಬೇರೆ ಹೆಸರಿನ ಅಚೇತನನೂ ಆದ. ಅಜಡರೂಪನೂ ಜಡರೂಪನೂ ಆದ, ಸತ್ಯ ಮತ್ತು ಅನೃತವಾಗಿ ತಾನು ಸತ್ಯನಾಗಿಯೇ ಉಳಿದ. ಆದ್ದರಿಂದಲೇ ಈ ಸಮಸ್ತವೂ ಸತ್ಯ. (ಅಥವಾ ಬ್ರಹ್ಮಸತ್ಯ), (7 ಬ್ರಹ್ಮ (ಸೃಷ್ಟಿಗೆ) ಮೊದಲು ಅಸತ್ (ಸೂಕ್ಷ್ಮ ಚೇತನಾಚೇತನ ವಿಶಿಷ್ಟ) ಆಗಿದ್ದ. (ಸೃಷ್ಟಿಯಾದ) ಬಳಿಕ ಸತ್ (ಸ್ಥೂಲಚಿದಚಿದ್ವಿಶಿಷ್ಟ) ಆದ. ಅವನು ತನ್ನನ್ನು ತಾನೇ ಹಾಗೆ ಮಾಡಿಕೊಂಡು ಸುಕೃತನಾದ. ಹೀಗೆ ಸುಕೃತನಾದ ಬ್ರಹ್ಮನೇ ರಸ (ರಸೋವೈಸ.) ಈ ರಸರೂಪಿ ಬ್ರಹ್ಮನನ್ನು ಹೊಂದಿ ಜೀವ ಆನಂದವುಳ್ಳವನಾಗುತ್ತಾನೆ.  ಆಕಾಶದಂತೆ ವ್ಯಾಪಕನಾಗಿರುವ ಈ ಆನಂದರೂಪಿ ಬ್ರಹ್ಮನಿಲ್ಲದಿದ್ದರೆ ಯಾವನು ತಾನೆ ಸಾಣಸಾರಿಕ ಸುಖವನ್ನಾಗಲಿ ಅಪವರ್ಗಿಕ ಸುಖವನ್ನಾಗಲಿ ಹೊಂದಬಹುದು? ನಿಃಸ್ಸಂದೇಹವಾಗಿ ಇವನೇ (ಎಲ್ಲರನ್ನೂ) ಆನಂದಗೊಳಿಸುವನು. ಈ ಅದೃಶ್ಯನೂ ಅಶರೀರನೂ ಅನಿರ್ವಾಚ್ಯನೂ ಆಧಾರರಹಿತನೂ ಆದ ಪರಮಾತ್ಮನಲ್ಲಿ ಯಾವಾಗ ಸಾಧಕ ಅಭಯಸಾಧನವಾದ ನಿರಂತರೋಪಾಸನಾ ನಿಷ್ಠೆ ಹೊಂದುತ್ತಾನೋ ಅವನು ಅಭಯ ಹೊಂದಿದವನಾಗುತ್ತಾನೆ. ಈ ನಿಷ್ಠೆಯಲ್ಲಿ ಸ್ವಲ್ಪ ವಿಚ್ಚೇಧವುಂಟಾದರೂ ಅವನಿಗೆ (ಜನ್ಮಮರಣರೂಪ) ಭಯವಿರುತ್ತದೆ. ಬ್ರಹೋಪಾಸಕನಿಗೆ ಅನ್ಯಚಿಂತೆಯೇ ಭಯಕಾರಕ. (8) ಈ ಬ್ರಹ್ಮನ ಭಯದಿಂದಲೇ ವಾಯು ಬೀಸುತ್ತಾನೆ. ಸೂರ್ಯ ಉದಯಿಸುತ್ತಾನೆ.  (ಅಥವಾ) ಸಂಚರಿಸುತ್ತಾನೆ.  ಅಗ್ನಿಯೂ ಇಂದ್ರನೂ ತಮ್ಮ ಕರ್ತವ್ಯ ಮಾಡುತ್ತಾರೆ. ಐದನೆಯ ಮೃತ್ಯ ಧಾವಿಸುತ್ತಾನೆ. (ಇನ್ನು ಬ್ರಹ್ಮಾಂದವಲ್ಲಿಯೆಂಬ ಹೆಸರಿಗೆ ಕಾರಣವಾದ) ಬ್ರಹ್ಮನ ಆನಂದದ ವಿಚಾರ; ಒಬ್ಬ ಯುವಕನಾಗಿದ್ದು, ತನ್ನಂತೆ ಯುವಕರಾದ ಇತರರಿಗೆ ಅಧ್ಯಾಪಕನಾಗಿಯೂ ತುಂಬ ಆಸೆಯುಳ್ಳವನೂ ಅತ್ಯಂತ ಧೃಡನೂ ಬಲಿಷ್ಠನೂ ಆಗಿ, ಈ ವಿತ್ತಪೂರ್ಣವಾದ ಪೃಥ್ವಿಯೆಲ್ಲಾ ಅವನದೇ ಆಗಿಬಿಟ್ಟರೆ ಅಂಥವನ ಆನಂದ (ಪರಿಮಾಣದಲ್ಲಿ) ಒಂದು ಮಾನುಷ ಆನಂದವೆನಿಸುತ್ತದೆ. ನೂರು ಮಾನುಷ ಆನಂದ ಮನುಷ್ಯಗಂಧರ್ವರ ಒಂದು ಆನಂದ. ಮನುಷ್ಯ ಗಂಧರ್ವರ ನೂರು ಆನಂದ ದೇವಗಂಧರ್ವರ ಒಂದು ಆನಂದ. ದೇವಗಂಧರ್ವರ ನೂರು ಆನಂದ ಚಿರಲೋಕವಾಸಿಗಳಾದ ಪಿತೃಗಳ ಒಂದು ಆನಂದ. ಆ ಪಿತೃಗಳ ನೂರು ಆನಂದ ಅಜಾನಜ ಎಂಬ ದೇವತೆಗಳ ಒಂದು ಆನಂದ. ಅಜಾನಜ ದೇವತಗಳ ಮೂರು ಆನಂದ ಕರ್ಮದೇವ ಎಂಬ ದೇವತೆಗಳ ಒಂದು ಆನಂದ. ಕರ್ಮದೇವತೆಗಳ ನೂರು ಆನಂದ ಒಂದು ದೇವಾನಂದ. ನೂರು ದೇವಾನಂದ ಇಂದ್ರನ ಒಂದು ಆನಂದ. ನೂರು ಇಂದ್ರಾನಂದ ಬೃಹಸ್ಪತಿಯ ಒಂದು ಆನಂದ. ಬೃಹಸ್ಪತಿಯ ನೂರು ಆನಂದ ಪ್ರಜಾಪತಿಯ ಒಂದು ಆನಂದ. ಪ್ರಜಾಪತಿಯ ನೂರು ಆನಂದ ಬ್ರಹ್ಮನ ಒಂದು ಆನಂದ. ಈ ಒಂದೊಂದು ಆನಂದವೂ ಕಾಮರಹಿತನಾದ ಶ್ರೋತಿಯ (ಬ್ರಹ್ಮನಿಷ್ಠೆ)ನಿಗೂ ಇರುತ್ತದೆ. ಈ ಆನಂದ ಸ್ವರೂಪ ಪರಬ್ರಹ್ಮನೇ ಪುರುಷರಲ್ಲಿ (ಅಂತರ್ಯಾಮಿಯಾಗಿಯೂ) ಆದಿತ್ಯದಲ್ಲಿ (ಹಿರಣ್ಮಯನಾಗಿ ಪ್ರಕಾಶಿಸುತ್ತಲೂ) ಇರುವನು. ಹೀಗೆ ತಿಳಿಯುವವ ಈ ಲೋಕವನ್ನು ಬಿಟ್ಟಮೇಲೆ ಅನ್ನಮಯಾತ್ಮನನ್ನು ಪ್ರಾಣಮಯಾತ್ಮನನ್ನು ಮನೋಮಯಾತ್ಮನನ್ನು ವಿಜ್ಞಾನಮಯಾತ್ಮನನ್ನು ಆನಂದಮಯಾತ್ಮನನ್ನು ಕ್ರಮವಾಗಿ ಸೇರಿಕೊಳ್ಳುತ್ತಾನೆ. (9) ಬ್ರಹ್ಮನ ಯಾವ ಆನಂದವನ್ನು ಇಷ್ಟೇ ಇಂದು ನಿರ್ಣಯಿಸಲು ಹೊರಟ ವಾಕ್ಕು ಮತ್ತು ಮನಸ್ಸು ಅದರ ಅನಂತ್ಯದ ಕಾರಣದಿಂದ, ಏನನ್ನೂ ಸಾಧಿಸಲಾರದೆ ಹಿಂದಿರುಗುತ್ತವೋ ಅಂಥ ಬ್ರಹ್ಮಾನಂದವನೂ ಅರಿತವ ಯಾವುದಕ್ಕೂ ಬಯಪಡುವುದಿಲ್ಲ. ಒಳ್ಳೆಯ ಕರ್ಮಮಾಡದಿದ್ದುದಕ್ಕೂ ಪಾಪಕರ್ಮಮಾಡಿದ್ದಕ್ಕೂ ಪರಿತಪಿಸುವುದಿಲ್ಲ.

ಮುಂದಿನದು ಭೃಗುವಲ್ಲೀ. ಭೃಗು ತನ್ನ ತಂದೆ ವರುಣನ ಉಪದೇಶದಂತೆ ಉಪಾಸನೆಮಾಡಿ ಆನಂದವೇ ಬ್ರಹ್ಮ ಎಂಬ e್ಞÁನವನ್ನು ಸಾಧಿಸುವ ಪ್ರಯೋಗಾತ್ಮಕ ವಿಧಾನ ಇಲ್ಲಿ ಉಕ್ತವಾಗಿದೆ. (1) ಭೃಗುತನ್ನ ತಂದೆ ವರುಣನ ಬಳಿಗೆ ಹೋಗಿ ಬ್ರಹ್ಮನನ್ನು ತಿಳಿಸು ಎಂದು ಬೇಡಿದ. ಅನ್ನ, ಪ್ರಾಣ, ಚಕ್ಷುಸ್, ಶ್ರೋತ್ರ, ಮನಸ್ಸು, ವಾಕ್, ಎಂದು ವರುಣ `ನಿರ್ದೇಶಿಸಿ, ಯಾವ ಉಪಾಧಾನಿ ನಿಮಿತ್ತದ ದೆಸೆಯಿಂದ ಪ್ರಾಣಿಗಳು ಹುಟ್ಟುತ್ತವೋ ಯಾವುದರಿಂದ ಅದು ಜೀವಿಸುತ್ತವೋ ಕೊನೆಗೆ ಯಾವುದನ್ನು ಪ್ರವೇಶಿಸುತ್ತವೊ ಅದು ಬ್ರಹ್ಮ. ಅದನ್ನು ತಿಳಿ` ಎಂದ. ಭೃಗು ಏಕಾಗ್ರತೆಯಿಂದ ಪರ್ಯಾಲೋಚಿಸಿದ. ಹಾಗೆ ತಪಸ್ಸು (-ಆಲೋಚನೆ). ಮಾಡಿ  (2) ಅನ್ನವೇ ಬ್ರಹ್ಮ ಎಂದು ತಿಳಿದು ತಂದೆಯಲ್ಲಿಗೆ ಬಂದ. ತಂದೆ ಹೇಳಿದ `ತಪಸ್ಸಿನಿಂದ ಬ್ರಹ್ಮನನ್ನು ತಿಳಿ` ಎಂದು. ಭೃಗು ಪುನಃ ಪರ್ಯಾಲೋಚಿಸಿದ.  (3) ಈ ಸಲ ಪ್ರಾಣವೇ ಬ್ರಹ್ಮ ಎಂದು ತಿಳಿದ. ವರುಣ ಪುನಃ ತಪಸ್ಸು ಮಾಡೆಂದ. (4) ಈ ಸಲದ ತಪಸ್ಸಿನಿಂದ ಮನಸ್ಸೇ ಬ್ರಹ್ಮ ಎಂದು ತಿಳಿದ. ತಂದೆಯ ಆಜ್ಞೆಯಂತೆ ಪುನಃ ತಪಸ್ಸುಮಾಡಿ (5) ವಿe್ಞÁನವೇ ಬ್ರಹ್ಮ ಎಂದು ತಿಳಿದ. ವರುಣ ಪುನಃ ತಪಸ್ಸು ಮಾಡೆಂದ.  (6) ತಪಸ್ಸಿನಿಂದ ಆನಂದವೇ ಬ್ರಹ್ಮ ಎಂಬ ಅರಿವು ಮೂಡಿತು. ಏಕೆಂದರೆ, ಆನಂದದ ದೆಸೆಯಿಂದ ತಾನೇ ಈ ಭೂತಗಳು ಹುಟ್ಟುತ್ತವೆ. ಆನಂದದಿಂದ ಜೀವಿಸುತ್ತವೆ (ಕೊನೆಗೆ ಆನಂದವನು ಕುರಿತು ಹೋಗುತ್ತವೆ (ಮತ್ತು ಅಲ್ಲೇ) ನೆಲೆಸುತ್ತವೆ. ಇದೇ ಭಾರ್ಗವೀ ವಾರುಣೀ ವಿದ್ಯೆ. ಇದು ಪರಮಾಕಾಶರೂಪಿ ಬ್ರಹ್ಮನಲ್ಲಿ ಪ್ರತಿಷ್ಠಿತವಾಗಿವೆ. ಇದನ್ನು ತಿಳಿಯುವವ ಪ್ರತಿಷ್ಠಿತನಾಗುತ್ತಾನೆ; ಅನ್ನವಂತನೂ ಅನ್ನಾದನೂ ಆಗುತ್ತಾನೆ. ಪ್ಮತ್ರರಿಂದಲೂ ಪಶುಗಳಿಂದಲೂ ಬ್ರಹ್ಮ ವರ್ಚಸ್ಸಿನಿಂದಲೂ ಕೀರ್ತಿಯಿಂದಲೂ ಮಹಾನ್ ಆಗುತ್ತಾನೆ. (7) ಅನ್ನವನ್ನು ನಿಂದಿಸಬಾರದು. (8) ಅನ್ನವನ್ನು ನಿರಾಕರಿಸಬಾರದು. (9) ಅನ್ನವನ್ನು ಬಹುವಾಗಿ ಮಾಡಬೇಕು. (10) ಅನ್ನಕ್ಕಾಗಿ (ನಮ್ಮ) ಮನೆಗೆ ಬಂದ ಯಾರನ್ನೂ ನಿರಾಕರಿಸಬಾರದು. ಪುರುಷನಲ್ಲಿರುವವನೂ ಆದಿತ್ಯನಲ್ಲಿರುವವನೂ ಒಬ್ಬನೇ ಅಂತರ್ಯಾಮಿ. ಇದನ್ನು ತಿಳಿದವ ಈ ಲೋಕವನ್ನು ಬಿಟ್ಟಮೇಲೆ ಕ್ರಮವಾಗಿ ಈ ಅನ್ನಮಯಾತ್ಮನನ್ನೂ ಪ್ರಾಣಾಮಯಾತ್ಮನನ್ನೂ ಮನೋಮಯಾತ್ಮನನ್ನೂ ವಿe್ಞÁನಮಯಾತ್ಮನನ್ನು ಆನಂದಮಯಾತ್ಮನನ್ನೂ ಸೇರಿ ಕಾಮಾಗ್ನಿ ಕಾಮರೂಪಿಯಾಗಿ ಈ ಲೋಕಗಳಲ್ಲಿ ಸಂಚರಿಸುತ್ತ ಆನಂದದಿಂದ ಸಾಮಗಾನ ಮಾಡುತ್ತಿರುತ್ತಾನೆ.
ಪರಮಾತ್ಮನ ಉಪಾಸನೆಗೆ ಖಚಿತವಾದ ವಿಧಾನವನ್ನೂ ಉಪಾಸನಾಫಲವನ್ನು ಸ್ಪಷ್ಟವಾಗಿ, ಅಂದರೆ ಮೊದಲನೆಯ ಶಿಕ್ಷಾವಲ್ಲಿಯಲ್ಲಿ ಸಾಧಾರಣ ಉಪದೇಶ ರೂಪದಲ್ಲೂ ಎರಡನೆಯ ಆನಂದವಲ್ಲಿಯಲ್ಲಿ ತಾತ್ತ್ವಿಕ ನಿರೂಪಣಾ ರೂಪದಲ್ಲೂ ಮೂರನೆಯ ಭೃಗುವಲ್ಲಿಯಲ್ಲಿ ದೃಷ್ಟಾಂತದೊಡನೆ ಪ್ರಯೋಗಾತ್ಮಕವಾಗಿಯೂ ವಿವರಿಸುವುದು ಈ ಉಪನಿಷತ್ತಿನ ವೈಶಿಷ್ಟ್ಯ. ಪ್ರಧಾನವಾಗಿ ಪರಿಗಣಿತವಾಗುತ್ತಿರುವ ಹತ್ತು ಹನ್ನೆರಡು ಉಪನಿಷತ್ತುಗಳಲ್ಲಿ ಇದೂ ಒಂದು. ಎಲ್ಲ ಮತಾಚಾರ್ಯರೂ ತಮ್ಮ ಮತಪ್ರತಿಪಾದನೆಗೆ ಈ ಉಪನಿಷತ್ತಿನ ಪ್ರಾಮಾಣ್ಯವನ್ನು ಅಂಗೀಕರಿಸಿದ್ದಾರೆ. ಈ ಉಪನಿಷತ್ತಿಗೆ ಪ್ರಾಚೀನ ಕಾಲದ ಮಧ್ಯಕಾಲೀನ ಅರ್ವಾಚೀನ ಬಾಷ್ಯಗಳು ಹೇರಳವಾಗಿವೆ. ಸತ್ಯಂವಧ, ಧರ್ಮಂಚರ ಮಾತೃದೇವೊಭವ, ಪಿತೃದೇವೋಭವ, ಆಚಾರ್ಯದೇವೋಭವ - ಮುಂತಾದ ಅನುಶಾಸನಗಳು ಸರ್ವರಿಗೂ ಸದಾಕಾಲವೂ ಅನ್ವಯಿಸಬಹುದಾದುವೆಂಬುದರಲ್ಲಿ ಭಿನ್ನಾಭಿಪ್ರಾಯವಿರದು. ಇಲ್ಲಿನ ಆನಂದಮೀಮಾಂಸೆ ಬ್ರಹ್ಮಸೂತ್ರಗಳ ಆನಂದಮಯಾಧೀಕರನದಲ್ಲಿ ವಿಪುಲವಾಗಿ ಚರ್ಚಿಸಲ್ಪಟ್ಟಿದೆ.
(ನೋಡಿ- ಉಪನಿಷತ್ತುಗಳು)								(ಎಸ್.ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ